ಕಯ್ಯಾರ ಕಿಞ್ಞಣ್ಣರೈ : 1915-. ಕಾಸರಗೋಡಿನಲ್ಲಿ ನೆಲೆಸಿರುವ ಕನ್ನಡ ಲೇಖಕರು. ಈಗ ಕೇರಳ ರಾಜ್ಯದಲ್ಲಿರುವ ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ 1915 ಜೂನ್ 8ರಂದು ಜನಿಸಿದರು. ತಂದೆ ದುಗ್ಗಪ್ಪರೈ, ತಾಯಿ ದೆಯ್ಯಕ್ಕ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೆರಡಾಲದಲ್ಲಿ ಪಡೆದ ಇವರು ರಾಮಾಯಣ, ಭಾರತ, ಯಕ್ಷಗಾನ, ತಾಳಮದ್ದಲೆಗಳ ಪರಿಸರದಲ್ಲಿ ಬೆಳೆದರು.

ಇವರಿಗೆ ಇಂಗ್ಲಿಷ್ ಶಿಕ್ಷಣ ಪಡೆಯಬೇಕೆಂಬ ಆಸೆಯಿತ್ತು. ಆದರೆ ತಂದೆ ತೀರಿಕೊಂಡಿದ್ದರಿಂದ ಅದಕ್ಕೆ ಅಡಚಣೆಯಾಯಿತು. ಸಂಸ್ಕೃತ ಶಾಲೆ ಸೇರಿದರು. ಸಂಸ್ಕೃತ ಕನ್ನಡಗಳೆರಡನ್ನೂ ಚೆನ್ನಾಗಿ ಕಲಿತರು. ವಿದ್ವಾನ್ ಪದವಿ ಗಳಿಸಿದರು. ಇವರು ಮೊತ್ತಮೊದಲು ಪತ್ರಿಕೋದ್ಯಮದಿಂದ ಆಕರ್ಷಿತರಾದರು. ಮಂಗಳೂರಿನ ‘ಸ್ವದೇಶಾಬಿsಮಾನಿ’ ಪತ್ರಿಕೆಯ ಮೂಲಕ ದುಡಿದರು. ಈ ನಡುವೆ ಇವರು ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದರಲ್ಲದೆ ಅಧ್ಯಾಪಕ ತರಬೇತಿ ಪದವಿಯನ್ನೂ ಗಳಿಸಿದರು. ಅನಂತರ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಇವರಿಗೆ ಶ್ರೇಷ್ಠ ಆಧ್ಯಾಪಕ ಎಂಬ ರಾಷ್ಟ್ರಪ್ರಶಸ್ತಿ ಲಭ್ಯವಾಯಿತು.

ಸಾಹಿತ್ಯ ಕ್ಷೇತ್ರಕ್ಕೆ ಇವರ ಕಾಣಿಕೆ ಮಹತ್ತ್ವಪುರ್ಣವಾದದ್ದು. ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಪಂಚಮೀ (5 ಉಪನಿಷತ್ ಕಾವ್ಯಗಳು), ಮಹಾಕವಿ ಕುಮಾರನ್ ಆಶಾನರ ಮೂರು ಖಂಡಕಾವ್ಯಗಳು (ಮಲಯಾಳಂನಿಂದ ಅನುವಾದ), ಕೊರಗ ಮತ್ತು ಕೆಲವು ಕವನಗಳು, ಶತಮಾನದ ಗಾನ, ಗಂಧವತೀ, ಪ್ರತಿಭಾ ಪಯಸ್ವಿನಿ (ಕವನಗಳ ಬೃಹತ್ ಸಂಪುಟ) ಮತ್ತು ಎನ್ನಪ್ಪೆ ತುಳುವಪ್ಪೆ (ತುಳು) ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ರತ್ನರಾಶಿ (ಜೀವನ ಚರಿತ್ರೆ), ಲಕ್ಷ್ಮೀಶನ ಕಥೆಗಳು, ಅನ್ನದೇವರು ಮತ್ತು ಇತರ ಕಥೆಗಳು, ಪರಶುರಾಮ, ಎಂ.ಬಿ.ಶೆಟ್ಟಿ (ಜೀವನಚರಿತ್ರೆ), ಕನ್ನಡದ ಶಕ್ತಿ (ಸಂಪಾದನೆ), ಕಾರ್ನಾಡು ಸದಾಶಿವರಾವ್ (ಜೀವನ ಚರಿತ್ರೆ), ಗಡಿನಾಡ ಕಿಡಿ(ಸಂಪಾದನೆ) ಮುಂತಾದವು ಇವರ ಗದ್ಯ ಕೃತಿಗಳು. ವಿರಾಗಿಣಿ ಎಂಬುದು ನಾಟಕ. ನಾಲ್ಕು ಭಾಗಗಳಲ್ಲಿ ಇವರು ಬರೆದಿರುವ ವ್ಯಾಕರಣ ಮತ್ತು ಪ್ರಬಂಧ ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗಿದೆ. ನಮೋದಯ ವಾಚನಮಾಲೆ (ಎಂಟು ಭಾಗಗಳು) ಮಕ್ಕಳಿಗಾಗಿ ರಚಿಸಿದ ಸಾಹಿತ್ಯ. ದುಡಿತವೆ ನನ್ನ ದೇವರು ಎಂಬ ಆತ್ಮ ಕಥನವನ್ನೂ ಇವರು ಬರೆದಿದ್ದಾರೆ.

ದೇಶಕ್ಕಾಗಿ ಮತ್ತು ನಾಡಿಗಾಗಿ ಹೋರಾಡಿದ, ಹೋರಾಡುತ್ತಿರುವ ನಿಷ್ಠಾವಂತ ಹೋರಾಟಗಾರ ರಾದ ಇವರು ಗಾಂದಿsೕಜಿಯವರ ಕಟ್ಟಾ ಅಬಿsಮಾನಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಮೊದಲು ಭರತಮಾತೆ, ಅನಂತರ ಕನ್ನಡತಾಯಿ, ತರುವಾಯ ತೌಳವಮಾತೆ ಎಂಬುದು ಇವರ ನಿಲುವು. ಕನ್ನಡಾಂತರ್ಗತಂ ತುಳುನಾಡು ನನ್ನದಿದು, ಭಾರತಾಂತರ್ಗತಂ ಕನ್ನಡದ ಬದುಕು ಎಂಬುದು ಇವರ ಧ್ಯೇಯ.
ಇವರು ಕವಿಯಷ್ಟೇ ಅಲ್ಲ, ವಿಮರ್ಶಕರೂ ಹೌದು. ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮೃತಿ ಕೃತಿ, ಸಾಹಿತ್ಯದೃಷ್ಟಿ, ಮಲಯಾಳಂ ಸಾಹಿತ್ಯ ಚರಿತ್ರಂ, ಮಹಾಕವಿ ಗೋವಿಂದ ಪೈ, ಸಂಸ್ಕೃತಿಯ ಹೆಗ್ಗುರುತು ಮುಂತಾದ ಕೃತಿಗಳಲ್ಲಿ ಇವರ ವಿಮರ್ಶನ ಪ್ರe್ಞೆ ವ್ಯಕ್ತವಾಗಿದೆ.
50 ವರ್ಷಗಳಿಂದ ಹಳ್ಳಿಯಲ್ಲೇ ನೆಲಸಿರುವ ಇವರಿಗೆ ಹಳ್ಳಿಯ ನಿರುಮ್ಮಳತೆ ತುಂಬ ಇಷ್ಟ. ನೇಗಿಲಿನ ಸಮಕ್ಕೆ ಲೇಖನಿ ಹಿಡಿದ ಇವರು ಕೃಷಿಯಲ್ಲೂ ಪಳಗಿದವರು. ಸದಾ ಖಾದೀಧಾರಿಯಾದ ಇವರದು ಆರಡಿ ಎತ್ತರದ ದಿsೕಮಂತ ನಿಲುವು, ಕಂಚಿನ ಕಂಠ. ಇವರೊಬ್ಬ ಶ್ರೇಷ್ಠ ವಾಗ್ಮಿ. ಇವರದು ತುಂಬು ಸಂಸಾರದ ಬದುಕು. ಇವರ ಪತ್ನಿಯ ಹೆಸರು ಉಞ್ಞಕ್ಕೆ. ಆರು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರು.
ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಕಯ್ಯಾರರು ಮಹತ್ತ್ವದ ಪಾತ್ರ ವಹಿಸಿದ್ದರು. ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಸಮಿತಿಯ ಕಾರ್ಯದರ್ಶಿಯಾಗಿಯೂ ಇವರು ನಿಷ್ಠೆಯ ಸೇವೆ ಸಲ್ಲಿಸಿದ್ದಾರೆ. ಇವರು 1997ರಲ್ಲಿ ಮಂಗಳೂರಿನಲ್ಲಿ ಜರುಗಿದ 66ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದರು.

ಕನ್ನಡದ ಹಿರಿಯಣ್ಣ ಎಂಬ ಅಬಿsಧಾನಕ್ಕೆ ಪಾತ್ರರಾಗಿರುವ ಕಯ್ಯಾರರಿಗೆ ಅನೇಕ ಪ್ರಶಸ್ತಿ ಗೌರವಗಳು ದೊರೆತಿವೆ. ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿಯಲ್ಲದೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯ ಯೋಧ ಪ್ರಶಸ್ತಿ -ಇವು ಕೆಲವು ಮುಖ್ಯ ಪ್ರಶಸ್ತಿಗಳು.	(ಪಿಇ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ